ಜ್ಞಾನನಿಧಿ ಪ್ರೊ|| ಮಲ್ಲಿನಾಥ್ ಕುಂಬಾರ್


    ಬಹಳ ದಿನದ ನಂತರ ಕನ್ನಡದಲ್ಲಿ ಬರೆಯಲು ಒಂದು ಅವಕಾಶ. ಡಾಕ್ಟರ್ ಮಲ್ಲಿನಾಥ್ ಕುಂಬಾರರ ಅಭಿನಂದನಾ ಗ್ರಂಥಕ್ಕೆ ನನ್ನ ಮತ್ತು ಅವರ ಒಡನಾಟದ ಕೆಲವು ತುಣುಕುಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟ ನನ್ನ ಗುರುಗಳಾದ ಡಾ. ಹರಿನಾರಾಯಣ್ ರವರಿಗೆ ವಂದನೆ. ಈ ಒಂದು ಪ್ರಯತ್ನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿ ಅನ್ನಿಸುತ್ತಿದೆ.



ಜ್ಞಾನನಿಧಿ ಪ್ರೊ|| ಮಲ್ಲಿನಾಥ್ ಕುಂಬಾರ್

ಪ್ರಾಧ್ಯಾಪಕರಾದ ಡಾ|| ಮಲ್ಲಿನಾಥ್ ಕುಂಬಾರ್ ಅವರ ಗೌರವಾರ್ಥ ಹೊರತರಲಿರುವ ಸಂಚಿಕೆಗಾಗಿ ಈ ಲೇಖನವನ್ನು ಬರೆಯಲು ದೊರೆತಿರುವ ಈ ಅವಕಾಶವು ಅತಿ ಅಮೂಲ್ಯವಾದದ್ದು ಎಂದು ಹೇಳಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಇವರು ತಮ್ಮ ಸುಧೀರ್ಘವೃತ್ತಿ ಜೀವನದ ಸಾರ್ಥಕ ಸೇವೆಯ ನಂತರ ನಿವೃತ್ತರಾಗುತ್ತಿರುವ ಈ ಸಂದರ್ಭದಲ್ಲಿ ಅವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಸಂಶೋಧನೆಯ ಮೂಲಕ ನೀಡಿರುವ ಲೇಖನಗಳು, ಕಾರ್ಯಕ್ಷಮತೆ, ಬದ್ಧತೆ, ಕಾರ್ಯ ವಿಧಾನಗಳು ಹಾಗೂ ನೀತಿಗಳ ಅನುಸರಣೆ, ವಿಚಾರಣಾ ಮನೋಧರ್ಮ, ವಿದ್ಯಾರ್ಥಿ ಸ್ನೇಹ ವ್ಯಕ್ತಿತ್ವ, ಇವು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ.

ಇದನ್ನು ವಿಸೃತವಾಗಿ ಹೇಳುವುದಾದರೆ ಪ್ರೊಫೆಸರ್ ಮಲ್ಲಿನಾಥ್ ಕುಂಬಾರರು ತಮ್ಮ ವೃತ್ತಿಜೀವನದುದ್ದಕ್ಕೂ ತಮ್ಮ ಆಡಳಿತ ಕೌಶಲ್ಯ, ಕಾರ್ಯೋನ್ಮುಖತೆ, ಹಾಗೂ ಕ್ರಮಬದ್ಧವಾದ ಕಾರ್ಯನಿರ್ವಹಣೆಯಿಂದ ಜನಪ್ರಿಯರಾಗಿದ್ದಾರೆ. Department of Studies in Library & Information Science (DoS LIS) ವಿಭಾಗದ ಸಮಗ್ರ ನಿರ್ವಹಣೆಯಲ್ಲಿನ ನಿರ್ಧಾರಗಳು ಇವರ ಮತ್ತೊಂದು ವಿಶಿಷ್ಟ ಗುಣ. ಅಲ್ಲದೆ ಇವರು ವಿದ್ಯಾರ್ಥಿಗಳು ಹಾಗೂ ಸಂಶೋಧಕರೊಂದಿಗೆ ತೋರುವ ಸ್ನೇಹಪರ ಭಾವ, ಕಾಳಜಿ ಉಳ್ಳ ಮಾರ್ಗದರ್ಶನ, ಇವೆಲ್ಲವೂ ಇವರನ್ನು ಮೇರು ವ್ಯಕ್ತಿಯನ್ನಾಗಿ ಮಾಡಿದೆ.

ಇವರ ಈ ವಿಶೇಷ ಗುಣ ಸ್ವಭಾವಗಳು, ಇವರು ಈ ಹಿಂದೆ ಕಾರ್ಯ ನಿರ್ವಹಿಸಿದ ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳಿಗೆ ಮನವರಿಕೆಯಾಗಿದ್ದು, ಎಲ್ಲೆಡೆಯೂ ಒಂದೇ ರೀತಿಯ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದಿರುವುದೇ ಒಂದು ವೈಶಿಷ್ಟ್ಯ. ಇದಲ್ಲದೆ ದೇಶ ವಿದೇಶಗಳಲ್ಲಿಯೂ ತಮ್ಮ ವಿದ್ಯಾರ್ಥಿ ಸಮೂಹವನ್ನು ಇಂದಿಗೂ ತಮ್ಮ ನಿರಂತರ ಮಾರ್ಗದರ್ಶನದ ಮೂಲಕ ಮುನ್ನಡೆಸುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಸಂಶೋಧನಾ ಮಾರ್ಗದರ್ಶಕರಾಗಿ ಹಲವಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಪಡೆಯುವ ಕನಸನ್ನು ನನಸಾಗಿಸಿದ್ದಾರೆ. ಪ್ರೊ|| ಕುಂಬಾರರು ಇವರ ವಿದ್ಯಾರ್ಥಿಗಳು ಕೈಗೊಳ್ಳುವ ಸಂಶೋಧನೆಯೂ ಬರೀ ವಿದ್ಯಾರ್ಥಿಯದೇ ಅಲ್ಲ ಅದು ನನ್ನದು ಕೂಡ ಎಂಬ ಉದಾತ್ತ ಸ್ವಭಾವದೊಂದಿಗೆ ಆ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ಪ್ರಾಯೋಗಿಕ ವಿಧಾನಗಳನ್ನು ಅಳವಡಿಸಿ, ವಿಷಯಗಳನ್ನು ವಿಶ್ಲೇಷಿಸಿ, ಸಂಶೋಧನೆಯ ಉದ್ದೇಶಗಳು, ಪ್ರಾಕಲ್ಪನೆಗಳು, ವೈಜ್ಞಾನಿಕತೆ ಪೂರ್ವ ಸಂಶೋಧನಾ ಸಮೀಕ್ಷೆ, ಸಮಾರೋಪ ಮತ್ತು ಫಲಿತಗಳು, ಮತ್ತು ಮುಂದಿನ ಸಂಶೋಧನೆಯ ಸಾಧ್ಯತೆಗಳ ಎಲ್ಲಾ ಹಂತಗಳಲ್ಲಿ ತಾವೇ ಖುದ್ದಾಗಿ ಭಾಗವಹಿಸಿ, ಬರೆಯಲು ಪ್ರೇರೇಪಿಸಿ, ಸಮಯಕ್ಕೆ ಸರಿಯಾಗಿ ಸಂಶೋಧನಾ ಗ್ರಂಥಗಳನ್ನು ವಿಶ್ವವಿದ್ಯಾನಿಲಯಕ್ಕೆ ಸಾದರಪಡಿಸಿ ಅವರ ಉನ್ನತ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಇವರ ವಿದ್ಯಾರ್ಥಿ ಸ್ನೇಹಿ ಸ್ವಭಾವಕ್ಕೆ ಪೂರಕವೆನಿಸುತ್ತದೆ. ಹೀಗಾಗಿಯೇ ಇವರ ವೃತ್ತಿ ಜೀವನದಲ್ಲಿ 32 ಡಾಕ್ಟರೇಟ್ ಪ್ರಬಂಧಗಳಿಗೆ ಮಾರ್ಗದರ್ಶನ ನೀಡಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಇವರ ಹೆಸರು ಚಿರಸ್ಥಾಯಿಯಾಗಲು ಶ್ರಮಿಸಿದ್ದಾರೆ ಎಂದರೆ ತಪ್ಪಾಗಲಾರದು.

ಪ್ರೊ|| ಕುಂಬಾರರ ನಿರ್ವಹಣಾ ಕೌಶಲ್ಯವನ್ನು ಹತ್ತಿರದಿಂದ ನೋಡಿದವರಲ್ಲಿ ನಾನು ಒಬ್ಬ. ಮೈಲಿಸ (Mysore Librarians and Information Scientists Association) ಕಾರ್ಯದರ್ಶಿಯಾಗಿ ಕಾರ್ಯಯೋನ್ಮುಖನಾದ ಪ್ರಾರಂಭಿಕ ದಿನಗಳಲ್ಲಿ ಕ್ಲಿಷ್ಟಕರವಾದ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ಆದರೆ ಶ್ರೀಯುತರು ನನ್ನ ಬೆನ್ನಿಗೆ ನಿಂತು ಸಂಘದ ಮೇಲ್ವಿಚಾರಣೆ ಹಾಗೂ ಆಡಳಿತದ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಿದರು.

ಮುಂದಿನ ದಿನಗಳಲ್ಲಿ ಮಿಲನ್ (Mysore University Library & Information Science Alumni Network)ನ ಕಾರ್ಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ನನ್ನಲ್ಲಿ ಆತ್ಮವಿಶ್ವಾಸ ಹಾಗೂ ಕೌಶಲ್ಯವನ್ನು ತುಂಬಿ ನಾನು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಕಾರಣಕರ್ತರಾದರು.
ನನಗೆ ಸಂಸ್ಕೃತ ಶುಭ ಸುಭಾಷಿತ ಜ್ಞಾಪಕಕ್ಕೆ ಬರುತ್ತಿದೆ -

ರವಿಸನ್ನಿಧಿಮಾತ್ರೇಣ ಸೂರ್ಯಕಾಂತಂ ಪ್ರಕಾಶಯೇತ್ |
ಗುರುಸನ್ನಿಧಿಮಾತ್ರೇಣ ಶಿಷ್ಯಜ್ಞಾನಂ ಪ್ರಕಾಶಯೇತ್ ||

ಸೂರ್ಯನು ನೀಡಿದ ಬೆಳಕನ್ನು ಹೊರಸೂಸುವ ಮೂಲಕ ಅಮೂಲ್ಯವಾದ ಕಲ್ಲು ಹೊಳೆಯುತ್ತದೆ. ಅದೇ ರೀತಿ ಶಿಕ್ಷಕ ನೀಡಿದ ಜ್ಞಾನವನ್ನು ಹೊರಸೂಸುವ ಮೂಲಕ ವ್ಯಕ್ತಿ ಬೆಳಗುತ್ತಾನೆ.

ಇದು ಇವರು ತಮ್ಮೊಡನೆ ಇತರರನ್ನು ಬೆಳೆಸುವ ಉದಾತ್ತ ಗುಣಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಇವರು ವೃತ್ತಿಯಲ್ಲಿ ಪ್ರಾಧ್ಯಾಪಕರಾದರು, ಗ್ರಂಥಾಲಯ ಸಿಬ್ಬಂದಿಗಳು ಎದುರಿಸುವ ದೈನಂದಿನ ಸಮಸ್ಯೆಗಳ ಬಗ್ಗೆ ಸ್ಪಷ್ಟ ಜ್ಞಾನವನ್ನು ಹೊಂದಿದ್ದರಿಂದ ವೃತ್ತಿಪರ ಗ್ರಂಥಪಾಲಕರು ಇವರ ಮಾರ್ಗದರ್ಶನವನ್ನು ಕೋರಿ ಸಲ್ಲಿಸಿದ ಕೋರಿಕೆಗಳಿಗೆ ಪ್ರತಿಸ್ಪಂದಿಸುವ ಗುಣ ಅದ್ವಿತೀಯವಾದದ್ದು. ವಾರ್ಷಿಕ ದಾಸ್ತಾನು ಪರಿಶೀಲನೆ (Stock Verification) ಬಗ್ಗೆ ಇವರು ಬರೆದಿರುವ ಲೇಖನಗಳು, ರಚಿಸಿರುವ ಗ್ರಂಥಗಳು, ಸುತ್ತೋಲೆಗಳ ಸಂಗ್ರಹ ಹಾಗೂ ಕೈಪಿಡಿಗಳು, ನಾಡಿನಾದ್ಯಂತ ವೃತ್ತಿಪರ ಗ್ರಂಥಪಾಲಕರಿಗೆ ಉಪಯುಕ್ತವಾಗಿದೆ. ಅಲ್ಲದೆ ವೃತ್ತಿಪರರು ಆಗಾಗಿ ದೂರವಾಣಿಯ ಮೂಲಕ ಸಂಪರ್ಕಿಸಿ ಅವರ ಮಾರ್ಗದರ್ಶನ ಕೋರುತ್ತಾರೆ. ಇವರು ಅತ್ಯಂತ ಕಾಳಜಿಯಿಂದ ಕೋರಿಕೆಗೆ ಸ್ಪಂದಿಸುವ ಹಾಗೂ ನೀಡುವ ಸಲಹೆ ಸೂಚನೆಗಳು ವೃತ್ತಿಪರರಲ್ಲಿ ನವಚೇತನವನ್ನು ತುಂಬುತ್ತದೆ ಹಾಗೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಸಹಕಾರಿ ಆಗುತ್ತದೆ. ಇದನ್ನು ನಾನು ನನ್ನ ದೈನಂದಿನ ಗ್ರಂಥಾಲಯ ನಿರ್ವಹಣೆಯಲ್ಲಿ ಬಳಸಿಕೊಂಡಿದ್ದರಿಂದ ಇದರ ಪ್ರಾಯೋಜಿಕ ವಿಚಾರಧಾರೆಯ ಫಲಾನುಭವಿ ಆಗಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ.

ಪ್ರೊ|| ಮಲ್ಲಿನಾಥ್ ಕುಂಬಾರರು ತಮ್ಮ ಉಡುಪಿನ ಬಗ್ಗೆ ತೋರುವ ಆಸಕ್ತಿ, ಬಣ್ಣಗಳ ಜೋಡಣೆ, ತಮ್ಮ ಆಕಾರಕ್ಕೆ ತಕ್ಕಂತೆ ಅದನ್ನು ಧರಿಸುವ ವಿಧಾನ, ಇವೆಲ್ಲವೂ ನನ್ನಲ್ಲಿಯೂ ಒಮ್ಮೊಮ್ಮೆ ಅಸೂಯೆ ಮೂಡಿಸಿದೆ. ಅವರು ಉತ್ತಮ ಉಡುಗೆ ಮಾತ್ರವಲ್ಲದೆ, ಸ್ವಚ್ಛತೆ ಕಾಪಾಡುವ ವಿಧಾನ, ಅಚ್ಚುಕಟ್ಟಾದ
ಕಚೇರಿ, ಸಮಯಪಾಲನೆ, ವೃತ್ತಿಬದ್ಧತೆ, ಕಾರ್ಯವಿಧಾನ, ನೀತಿ ಪಾಲನೆ, ಸಾಮಾಜಿಕ ನ್ಯಾಯ, ಪರಸ್ಪರ ಗೌರವ, ಆಳವಾದ ಜ್ಞಾನ, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ, ಹೃದಯ ವೈಶಾಲ್ಯತೆ ಹಾಗೂ ಸೂಕ್ಷ್ಮ ಸಂವೇದಿ ಗುಣಗಳೆಲ್ಲವೂ ಒಂದೇ ವ್ಯಕ್ತಿಯಲ್ಲಿ ಮಿಲಿನವಾಗಿದ್ದು ಅವರನ್ನು ಹತ್ತಿರದಿಂದ ಬಲ್ಲವರು ಈ ಗುಣಗಳನ್ನು ಗುರುತಿಸಬಹುದು ಎಂದರೆ ಅದು ಉತ್ಪ್ರೇಕ್ಷೆ ಆಗಲಾರದು.
ಗುಣನಿಧಿಯಾದ ಪ್ರೊ|| ಮಲ್ಲಿನಾಥ್ ಕುಂಬಾರರೊಂದಿಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸುವ ಭಾಗ್ಯ ನನ್ನದಾಗಿತ್ತು. ಚೆನ್ನೈ, ಹೈದರಾಬಾದ್, ತಿರುಪತಿ, ಡೆಲ್ಲಿ, ಮುಂತಾದ ಸ್ಥಳಗಳಲ್ಲಿ ಪ್ರಯಾಣಿಸುವ ಅಪರೂಪದ ಅವಕಾಶ ನನ್ನದಾಗಿತ್ತು. ಆ ಸಂದರ್ಭದಲ್ಲಿ ಹೊರ ಪ್ರದೇಶದಲ್ಲಿ ನೆಲೆಸಿರುವ ಇವರ ವಿದ್ಯಾರ್ಥಿ ಸಮೂಹ ಇವರು ಆ ಸ್ಥಳಕ್ಕೆ ಆಗಮಿಸುವ ಮೊದಲೇ ತಿಳಿದುಕೊಂಡು ಅತ್ಯಂತ ಕಾಳಜಿಯಿಂದ ಇವರಿಗೆ ಹಾಗೂ ಇವರೊಡನೆ ಇರುವ ಇತರರಿಗೂ ತೋರಿಸುತ್ತಿದ್ದ ಆದರ, ಸ್ಥಳಕ್ಕೆ ತಲುಪಿದ್ದಾಗಿನಿಂದ ನಿರ್ಗಮಿಸುವವರೆಗೂ ತೋರಿಸುತ್ತಿದ್ದ ಕಾಳಜಿ, ಹತ್ತಿರದ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಯುವ ಆಸಕ್ತಿ, ಹಾಗೂ ಉಳಿದುಕೊಳ್ಳಲು ಮಾಡುತ್ತಿದ್ದ ವ್ಯವಸ್ಥೆ ಎಲ್ಲವೂ ಹೃದಯ ಸ್ಪರ್ಶಿಯಾಗಿರುತ್ತಿತ್ತು. ಇದು ಅವರ ವಿದ್ಯಾರ್ಥಿ ಬಳಗ ಹಾಗೂ
ವೃತ್ತಿಪರ ಸ್ನೇಹಿತರಿಗೆ ಪ್ರೊ|| ಕುಂಬಾರರನ್ನು ಕೇವಲ ವ್ಯಕ್ತಿಯಗಿ ಅಲ್ಲದೆ ಅದ್ಭುತ ಶಕ್ತಿಯನ್ನಾಗಿ ಪರಿಗಣಿಸುತ್ತಾರೆ ಎಂಬುದನ್ನು ಅಲ್ಲಗಳೆಯಲಾಗದು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಡಾ|| ಮಲ್ಲಿನಾಥ್ ಕುಂಬಾರರ ಅಪರಿಮಿತ ಕೊಡುಗೆ ಹಾಗೂ ಅವರ ಗುಣಾತೀತ ವರ್ಚಸ್ಸಿಗೆ ಸಂದಿರುವ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಾಕ್ಷಿಯಾಗಿದೆ. ರಾಜ್ಯ ಸರ್ಕಾರಗಳು, ದೇಶಿ ಹಾಗೂ ವಿದೇಶಿ ಸಂಘ ಸಂಸ್ಥೆಗಳು, ಹಾಗೂ ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಗಳು, ಕುಂಬಾರರ ಜ್ಞಾನ, ಗುಣ, ಸೇವೆ ಹಾಗೂ ಕೊಡುಗೆಯನ್ನು ಪರಿಗಣಿಸಿ ಅವರನ್ನು ಸನ್ಮಾನಿಸಿವೆ.

ಶ್ರೀಯುತ ಕುಂಬಾರರು ವೃತ್ತಿಪರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳಲ್ಲದೆ ಮಾನವೀಯ ಸಂಬಂಧಗಳನ್ನು ಮೈಗೂಡಿಸಿಕೊಂಡು ನಿಗರ್ವಿ ವ್ಯಕ್ತಿಯಾಗಿ ನಮ್ಮೆಲ್ಲರಿಗೂ ರ್ತಿದಾಯಕರಾಗಿದ್ದಾರೆ. ವೃತ್ತಿಯೊಂದಿಗೆ ತೋರುವ ಸಮರ್ಪಣ ಮನೋಭಾವ, ಉತ್ಸಾಹ, ನಿಜಕ್ಕೂ ಪ್ರಸಂಶನೀಯ. ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದೆಡೆಗೆ ಸಾಗಿಸುವಲ್ಲಿ ಅವರು ತೋರುವ ಕಾಳಜಿ ಅಪರಿಮಿತವಾದದ್ದು.
ಪ್ರೊ|| ಮಲ್ಲಿನಾಥ್ ಕುಂಬಾರರು ತಮ್ಮ ಜೀವನದ ಮತ್ತೊಂದು ಮಜಲನ್ನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ಅವರ ಅಸಾಧಾರಣ ಸೇವೆ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಅವರು ತೋರಿರುವ ಬದ್ಧತೆಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಅವರು ಉತ್ತಮ ಶೈಕ್ಷಣಿಕ
ವ್ಯವಸ್ಥಾಪನೆ, ವಿದ್ಯಾರ್ಥಿ ಸ್ನೇಹ ವ್ಯಕ್ತಿತ್ವ ಹಾಗೂ ಸಂಶೋಧನಾ ಮಾರ್ಗದರ್ಶನದಂತಹ ವೃತ್ತಿಪರ ಗುಣಗಳು ನಮಗೆ ಸ್ಪೂರ್ತಿಯನ್ನು ನೀಡುತ್ತಲೇ ಇರುತ್ತದೆ ಎಂಬುವಲ್ಲಿ ಯಾವುದೇ ಸಂಶಯ ಇರುವುದಿಲ್ಲ.

ನಿಮ್ಮ ಜೀವನದ ಹೊಸ ಅಧ್ಯಾಯವು ಸಂತೋಷ, ನೆಮ್ಮದಿ, ಸಮೃದ್ಧಿಯಿಂದ ತುಂಬಿರಲಿ ನೀವು DoS LIS ನಲ್ಲಿ ಬೋಧಕರಾಗಿ ಕಾಣದಿದ್ದರೂ ಪ್ರತಿಯೊಬ್ಬರಲ್ಲಿಯೂ ನಿಮ್ಮ ಆದರ್ಶ, ವೃತ್ತಿಪರತೆ, ಕಾರ್ಯಕ್ಷಮತೆ ಮೂಲಕ ಪ್ರತಿಫಲನವಾಗಿರುತ್ತೀರಿ. ನಿಮ್ಮ ಮುಂದಿನ ಪ್ರಯತ್ನಗಳು ಯಶಸ್ವಿಯಾಗಲಿ, ಶುಭವಾಗಲಿ ಎಂದು ನಾನು ಬಯಸುತ್ತೇನೆ.

Comments

Popular posts from this blog

Engaging library fraternity with emerging technologies

RIMS tool for analyzing research contribution